ತ್ರಿವೇಣಿ
	1928-1963. ಸಮಕಾಲೀನ ಕನ್ನಡ ಮಹಿಳಾ ಕಾದಂಬರಿಗಾರ್ತಿ. ಮಂಡ್ಯ ಜಿಲ್ಲೆಯವರಾದ ಇವರು 1-9-1928ರಲ್ಲಿ ಜನಿಸಿದರು. ಇವರು ಬಿ. ಎಂ. ಕೃಷ್ಣಸ್ವಾಮಿ ಮತ್ತು ತಂಗಮ್ಮ ಅವರ ದ್ವಿತೀಯ ಪುತ್ರಿ. ಇವರ ತಂದೆ ಕನ್ನಡದ ಕಣ್ವ ಎನಿಸಿದ ಬಿ. ಎಂ. ಶ್ರೀ ಅವರ ಸಹೋದರ. ಇವರ ಹುಟ್ಟು ಹೆಸರು ಭಾಗೀರಥಿ. ಕರೆದ ಹೆಸರು ಅನುಸೂಯ. ಮನೆಯಲ್ಲಿ ಎಲ್ಲರು ಮೆಚ್ಚಿ ಕೂಗಿದ್ದು ಅಂಚು ಎಂದು. ಲೇಖಕಿ ಎಂ.ಕೆ. ಇಂದಿರಾ ಅವರು ಇವರನ್ನು ತ್ರಿವೇಣಿ ಎಂದು ಕರೆದರು. ಸಾಹಿತ್ಯ ಪ್ರಪಂಚದಲ್ಲಿ ಪ್ರಸಿದ್ಧವಾದ ಈ ಹೆಸರು ಇವರ ನಿಜಜೀವನದಲ್ಲೂ ಸ್ಥಿರವಾಯಿತು.

	ಇವರು ತಮ್ಮ ಎಂಟನೆಯ ವರ್ಷದಲ್ಲಿ ತೀವ್ರ ಗೂರಲಿನಿಂದ ಬಳಲಿದರು. ಆ ಸಮಯದಲ್ಲಿ ಕಾಲವನ್ನು ಕಳೆಯಲು ಇವರು ವ್ಯಾಸಂಗ ನಿರತರಾದರು. ಇದೇ ಇವರು ಮುಂದೆ ಸಾಹಿತ್ಯ ಪ್ರಪಂಚದಲ್ಲಿ ಧುಮುಕಲು ಕಾರಣವಾಯಿತು ಎನ್ನಬಹುದು.

	ಇವರು ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಮುಗಿಸಿ, ಮೈಸೂರಿನಲ್ಲಿ ಅಜ್ಜಿ ಮನೆಸೇರಿ ಮಹಾರಾಜ ಕಾಲೇಜಿನ ವಿದ್ಯಾರ್ಥಿನಿಯಾಗಿ, ಮನಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆಯ್ದುಕೊಂಡರು. ಓದಿನಲ್ಲಿ ಇವರಿಗಿದ್ದ ಅಪಾರ ಶ್ರದ್ಧೆ. ಆಸಕ್ತಿಗಳ ಪರಿಣಾಮವಾಗಿ ಬಿ.ಎ. ಪದವಿ ಪಡೆದಾಗ ಚಿನ್ನದ ಪದಕ ಗಿಟ್ಟಿಸಿದರು. ಅನಂತರ ಕೆಲದಿನ ಮಂಡ್ಯದಲ್ಲಿ ಅಧ್ಯಾಪಕ ವೃತ್ತಿಯನ್ನವಲಂಬಿಸಿದರಾದರೂ ಅದು ನೀರಸವೆನಿಸಿತು. ಇದರ ನಡುವೆಯೇ ಇವರು ಬದಲಾಗುತ್ತಿರುವ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಕಂಡು ಕೇಳಿದ ಘಟನೆಗಳ ಬೆನ್ನೇರಿ ಕಲ್ಪನೆಯನ್ನು ಕುದುರಿಸಿ ಸಣ್ಣ ಕಥೆಗಳನ್ನು ಬರೆದರು. ಒಟ್ಟು ಇವರು 41 ಸಣ್ಣಕತೆಗಳನ್ನು ಬರೆದು ಅವನ್ನು ಹೆಂಡತಿಯ ಹೆಸರು, ಎರಡು ಮನಸ್ಸು, ಸಮಸ್ಯೆಯ ಮಗು-ಎಂಬ ಮೂರು ಕಥಾ ಸಂಕಲನಗಳಲ್ಲಿ ಪ್ರಕಟಿಸಿದ್ದಾರೆ. ಸಮಸ್ಯೆಯ ಮಗು ಕಥಾಸಂಕಲನ ರಾಜ್ಯ ಸರ್ಕಾರದ ಬಹುಮಾನವನ್ನು ಪಡೆಯಿತು. ಇವರ ಸಣ್ಣ ಕಥೆಯೊಂದಕ್ಕೆ ಎಸ್.ಸಿದ್ಧೇಗೌಡರ ಬಂಗಾರದ ಪದಕ ಹಾಗೂ ತಾತಯ್ಯನವರ ವಿಶೇಷ ಪಾರಿತೋಷಕಗಳು ಲಭಿಸಿವೆ. ಇವರ ಒಂದೆರಡು ಕತೆಗಳು ತಂಗಿಯ ಹೆಸರಿನಲ್ಲಿ ಪ್ರಕಟವಾದದ್ದೂ ಉಂಟು. ಇವರ ಕಥಾಸಂಕಲನಗಳಲ್ಲಿ ಗಂಡಿನ ಸ್ವಾರ್ಥಮನೋಭಾವವನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡಿರುವುದರಿಂದ ಪ್ರತಿ ಪಾದನೆಗಿಂತ ವಸ್ತುವಿಗೇ ಮಹತ್ತ್ವ ಹೆಚ್ಚು.

	1950 ರಲ್ಲಿ ತ್ರಿವೇಣಿಯವರು ತಮ್ಮ ಸಮೀಪದ ಸಂಬಂಧಿ ಎಸ್. ಎನ್. ಶಂಕರ್ ಎಂಬುವರನ್ನು ವಿವಾಹವಾದರು. ಗಂಡನ ಪ್ರೋತ್ಸಾಹದಿಂದಾಗಿ ಚಿಕ್ಕಂದಿನಿಂದ ಬೆಳೆದು ಬಂದಿದ್ದ ಸಾಹಿತ್ಯಾಸಕ್ತಿ ವಿಕಾಸಗೊಳ್ಳಲು ಅವಕಾಶವೊದಗಿತು. ಇವರ ಪ್ರಥಮ ಕಾದಂಬರಿ ಅಪಸ್ವರ ಅಷ್ಟು ಯಶಸ್ವಿಯಾಗಲಿಲ್ಲ. ಮುಂದೆ ಹೂವು ಹಣ್ಣು ಕೃತಿ ಪ್ರಕಟವಾಯಿತು. ಕೇವಲ ಒಂದು ದಶಕದ ಅವಧಿಯಲ್ಲಿ 20 ಕಾದಂಬರಿಗಳನ್ನು ಮೂರು ಕಥಾಸಂಕಲನಗಳನ್ನು ಈಕೆ ರಚಿಸಿದರು. ಅಪೂರ್ಣವಾಗಿದ್ದ ಇವರ ಕೊನೆಯ ಕಾದಂಬರಿ ಅವಳ ಮಗಳು ಎಂ.ಸಿ. ಪದ್ಮಾರವರಿಂದ ಪೂರ್ಣಗೊಂಡಿತು.

	ತಾಯ್ತನಕ್ಕೆ ಹೆಚ್ಚಿನ ಬೆಲೆಯಿತ್ತಿದ್ದ ತ್ರಿವೇಣಿ ಅದಕ್ಕಾಗಿ ಹಂಬಲಿಸಿದರು. ಹಂಬಲವೇನೋ ಈಡೇರಿತು. ಅದರೆ ಹೆಣ್ಣು ಮಗುವೊಂದಕ್ಕೆ ಜನ್ಮಕೊಟ್ಟು ಹತ್ತು ದಿನಗಳಲ್ಲಿಯೇ ಇವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

	ತ್ರಿವೇಣಿಯವರಿಗೆ ನೃತ್ಯ, ನಾಟಕ, ಚಲನಚಿತ್ರಗಳಲ್ಲಿ ಅಪಾರ ಆಸಕ್ತಿಯಿತ್ತು. ಆಂಗ್ಲ ಸಾಹಿತ್ಯ ಹಾಗೂ ಹಿಂದಿ, ಬಂಗಾಳಿ ಸಾಹಿತ್ಯಗಳಲ್ಲಿ ಅಭಿಮಾನವಿತ್ತು. ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರೂ ಧಾರ್ಮಿಕ ವಿಚಾರಗಳಲ್ಲಿ ಮೂಢನಂಬಿಕೆ ಇರಲಿಲ್ಲ. ಜಾತಿಪದ್ಧತಿಯನ್ನು ಖಂಡಿಸಿದರು.

	ಇವರ ಕಾದಂಬರಿಗಳನ್ನು ಸಾಮಾಜಿಕ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದವೆಂದು ಎರಡು ಗುಂಪಾಗಿ ವಿಂಗಡಿಸಬಹುದು. ಬೆಕ್ಕಿನ ಕಿಣ್ಣು, ದೂರದಬೆಟ್ಟ, ಮುಚ್ಚಿದ ಬಾಗಿಲು, ಹಾಗೂ ಶರಪಂಜರಗಳು ಮನಶಾಸ್ತ್ರದ ಗುಂಪಿಗೆ ಸೇರಿದರೆ ಉಳಿದವು ಸಾಮಾಜಿಕ ಗುಂಪಿನಲ್ಲಿ ಉಳಿಯುತ್ತವೆ. ಸಾಮಾಜಿಕ ವಸ್ತುವನ್ನು ಚಿತ್ರಿಸುವ ಕಾದಂಬರಿಗಳಲ್ಲೂ ಪಾತ್ರಗಳ ಆಂತರಿಕ ತೊಳಲಾಟ, ಘರ್ಷಣೆ ಮುಂತಾದ ಮನೋವಿಜ್ಞಾನಕ್ಕೆ ಸಂಬಂಧಿಸಿದ ಸನ್ನಿವೇಶಗಳು ಕಂಡುಬಂದರೂ ವಸ್ತುವಿನ ದೃಷ್ಟಿಯಿಂದ ಅವನ್ನು ಸಾಮಾಜಿಕ ಕಾದಂಬರಿಗಳ ಗುಂಪಿಗೇ ಸೇರಿಸಬೇಕಾಗುತ್ತದೆ. ಹೂವು ಹಣ್ಣು ಕಥೆಯ ರಮಾ, ಸೋತು ಗೆದ್ದವಳು ಕಥೆಯ ಭಾರತಿ, ಕೀಲುಗೊಂಬೆ ಕಥೆಯ ಸೀತೆ ಇವರೆಲ್ಲರ ಮಾನಸಿಕ ತೊಳಲಾಟವನ್ನು ಕಂಡಾಗ ಮೇಲಿನ ಮಾತು ಸತ್ಯ ಎನಿಸುತ್ತದೆ.

	ಹೂವುಹಣ್ಣು ಕಾದಂಬರಿಯ ವಸ್ತು ಗಂಡ ಸತ್ತನಂತರ ಬಡತನಕ್ಕೆ ತುತ್ತಾದ ಹೆಣ್ಣೊಬ್ಬಳು ಪರಿಸರದ ಒತ್ತಡದಿಂದ ನಿರ್ವಾಹವಿಲ್ಲದೆ ವೇಶಾವೃತ್ತಿಗೆ ಇಳಿದುದು. ಹೆಣ್ಣನ್ನು ಅನೀತಿಯ ಜೀವನದತ್ತ ನಡೆಸುವುದು ದೈಹಿಕ ಸುಖಾಪೇಕ್ಷೆ ಹಾಗೂ ದಾರಿದ್ರ್ಯ, ಗಂಡನಿರುವ ವರೆಗೂ ದಾರಿದ್ರ್ಯವನ್ನು ಕಡೆಗಾಣಿಸಿ ಇದ್ದಷ್ಟರಲ್ಲೇ ತೃಪ್ತಿಯಿಂದಿದ್ದ ರಮಾ ಗಂಡನ ಸಾವಿನ ಅನಂತರ ಅನಿವರ್ಯವಾಗಿ ಅನೀತಿಯ ಮಾರ್ಗ ಹಿಡಿಯುತ್ತಾಳೆ. ಕಾದಂಬರಿಯ ಪ್ರಾರಂಭದಲ್ಲಿಯೇ ರಮಾ ಎಡವಿದರೂ ಅವಳ ಬಗ್ಗೆ ಓದುಗರಿಗೆ ಅನುಕಂಪ ಉಂಟಾಗುವಂತೆ ಮಾಡಲು ಹೆಣ್ಣಿನ ಅನೀತಿ ಜೀವನಕ್ಕೆ ಸಮಾಜವೇ ಹೊಣೆ ಎಂಬಂತೆ ಚಿತ್ರಿಸಲಾಗಿದೆ. ಹೀಗಾಗಿ ಕಥೆಯ ವಸ್ತು ಚೆನ್ನಾಗಿದ್ದರೂ ನಿರೂಪಣೆಯಲ್ಲಿ ಕೃತಕತೆ ಕಾಣಿಸುತ್ತದೆ. ಆದರೆ ತಾವರೆ ಕೊಳದ ರತ್ನ, ಸೋತು ಗೆದ್ದವಳು ಕಥೆಯ ಭಾರತಿ ಮೊದಲಾದವರ ಅನೀತಿಯ ಜೀವನಕ್ಕೆ ಕಾರಣ ಅವರವರ ಮಾನಸಿಕ ದೌರ್ಬಲ್ಯವೇ ಹೊರತು ಸಮಾಜವಲ್ಲವೆಂಬುದು ವೇದ್ಯವಾಗುತ್ತದೆ.

ಎಳೆವಯಸ್ಸಿನ ತಬ್ಬಲಿ ಹೆಣ್ಣೊಬ್ಬಳ ಮನಸ್ಸಿನಲ್ಲಿ ಬಿತ್ತಿದ ಬೀಜ ಚಿಗುರೊಡೆಯುವುದಕ್ಕೆ ಮೊದಲೇ ಹಿರಿಯರ ಬಲವಂತಕ್ಕಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ ಆಗತಾನೇ ಮೊಳಕೆಯೊಡೆಯುತ್ತಿದ್ದ ಬೀಜವನ್ನು ಕಿತ್ತೊಗೆಯಲು ಇಷ್ಟ ಪಡದೆ ಅದಕ್ಕೆ ತಕ್ಕ ಪರಿಸರ ಸಿಕ್ಕಾಗ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಾಳೆ. ಇದು ಅಪಸ್ವರ ಕಾದಂಬರಿಯ ಕಥಾವಸ್ತು. ಬಾಲ್ಯದಿಂದಲೂ ತಾನು ವೈದ್ಯಳಾಗಬೇಕೆಂದಿದ್ದ ಮೀರ ಪ್ರಾರಂಭದಲ್ಲಿಯೇ ಅಪಸ್ವರವನ್ನು ಕಂಡು ಅನಿವಾರ್ಯವಾಗಿ ಶ್ಯಾಮನನ್ನು ಮದುವೆಯಾಗಿ ದಾಂಪತ್ಯಜೀವನದಲ್ಲಿ ತೃಪ್ತಿಕಾಣದೆ ಅಪಜಯವನ್ನನುಭವಿಸುತ್ತಾಳೆ. ಅಪಜಯ ಇದರ ಮುಂದಿನ ಭಾಗ.

	ತಾಮಸ್ ಹಾರ್ಡಿಯ ದಿ ರಿಟರ್ನ್ ಆಫ್ ನೇಟಿವ್ ಕಾದಂಬರಿಯ ಪಾತ್ರಗಳು ಹಾಗೂ ಸನ್ನಿವೇಶಗಳ ಸ್ಫೂರ್ತಿ ಈ ಕಾದಂಬರಿಯ ಮೇಲಿದೆಯಾದರೂ ಕಥೆಯ ಓಟ, ವಸ್ತುವಿನ ವಿಸ್ತಾರಗಳಲ್ಲಿ ಲೇಖಕರ ಸ್ವಂತಿಕೆ ಇದೆ. ಆದರೆ ಕಥೆಯ ಚೌಕಟ್ಟನ್ನು ಹಿಗ್ಗಿಸುವುದಕ್ಕಾಗಿ ಅಂತರ್ಜಾತೀಯ ವಿವಾಹ, ಮೆಡಿಕಲ್ ಕಾಲೇಜಿನಲ್ಲಿ ಸ್ಥಳಾವಕಾಶಕ್ಕಾಗಿ ನಡೆಯುವ ಕುತಂತ್ರ, ವೈದ್ಯವೃತ್ತಿಯಲ್ಲಿ ಆದರ್ಶ, ಕುಟುಂಬ ಯೋಜನೆಯ ಬಗ್ಗೆ ಉಪದೇಶ-ಇವನ್ನೆಲ್ಲ ಬಲವಂತವಾಗಿ ತುಂಬಿದಂತಿದೆ.

	ಆರು ಮಂದಿ ವಿದ್ಯಾರ್ಥಿನಿಯರು ಕಂಕಣ ತೊಟ್ಟು ಮುಕ್ತಿ ಪಡೆದುದು ಕಂಕಣ ಹಾಗೂ ಅದರ ಮುಂದಿನ ಭಾಗ ಮುಕ್ತಿ ಕಾದಂಬರಿಗಳ ವಸ್ತು.

	ಶ್ರೀಮಂತ ಹೆಣ್ಣೊಬ್ಬಳ ದುರಂತವನ್ನೊಳಗೊಂಡ `ಬೆಳ್ಳಿಮೋಡ, ವಿಧವಾ ಸಮಸ್ಯೆಯನ್ನೊಳಗೊಂಡಿದ್ದರೂ ತಿಳಿಹಾಸ್ಯದ ಮೆಲು ಹೊದಿಕೆಯೊಂದಿಗೆ ಚಿತ್ರಿತವಾಗಿರುವ `ಹಣ್ಣೆಲೆ ಚಿಗುರಿದಾಗ, ಬಡತನದ ಬೇಗೆಯಿಂದ ಸಾಕಕೊಟ್ಟ ಹೆಣ್ಣು ಮಗಳೊಬ್ಬಳ ಹೃದಯಸ್ಪರ್ಶಿ ಕಥೆಯನ್ನೊಳಗೊಂಡ `ಅವಳ ಮನೆ, ಕುರೂಪಿಯಲ್ಲದಿದ್ದರೂ ಸುಂದರಿಯಲ್ಲದ ಯುವತಿಯೊಬ್ಬಳು ಅವಿವಾಹಿತಳಾಗಿದ್ದಾಗಲೇ ಕಾಲುಜಾರಿ, ಕೊಲೆಯ ಆಪಾದನೆಯಿಂದ ಜೈಲು ಸೇರಿ ದುರಂತ ಮರಣವನ್ನಪ್ಪಿದ ಕಥೆಯಾದ `ಮೊದಲ ಹೆಜ್ಜೆ, ಅತೃಪ್ತ ಕಾಮದ ದಾರುಣತೆಯನ್ನು ಹೊಮ್ಮಿಸುವ ಹಾಗೂ ಮದುವೆಯಾದ ಹೆಣ್ಣುಗಂಡುಗಳಿಗೆ ಇರಬೇಕಾದ ಲೈಂಗಿಕ ವಿಷಯದ ಪರಿಜ್ಞಾನವನ್ನು ತೋರಿಸಿಕೊಡುವ `ಕೀಲುಗೊಂಬೆ-ಇವು ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಕಾದಂಬರಿಗಳಾಗಿವೆ.

	ಆದರೆ ಯಾವ ಸಮಸ್ಯೆಯನ್ನೂ ಒಳಗೊಳ್ಳದೆ ಕೇವಲ ಮನೋರಂಜನೆಗಾಗಿಯೇ ಸೃಷ್ಟಿಯಾಗಿರುವ ಹೃದಯಗೀತ, ವಸಂತಗಾನ, ಕಾಶೀಯಾತ್ರೆ, ಬಾಳು ಬೆಳಗಿತು ಕಾದಂಬರಿಗಳು ಸಿನೀಮೀಯವಾಗಿವೆ.

	ಮಾನಸಿಕ ವಿಶ್ಲೇಷಣೆಗೆ ಸಂಬಂಧಪಟ್ಟ ಬೆಕ್ಕಿನ ಕಣ್ಣು, ದೂರದ ಬೆಟ್ಟ, ಮುಚ್ಚಿದ ಬಾಗಿಲು ಹಾಗೂ ಶರಪಂಜರಗಳಂಥ ಕಾದಂಬರಿಗಳು ತಮ್ಮವೇ ಆದ ವಿಶಿಷ್ಟತೆಯನ್ನು ಪಡೆದುಕೊಂಡಿವೆ.

	ಸರಿಯಾದ ಹೊಂದಿಕೆಯಿಲ್ಲದ ಸಂಸಾರ, ಯೌವನದಲ್ಲಿ ಕಾಲಿಡುತ್ತಿದ್ದ ಹುಡುಗಿಯೊಬ್ಬಳ ವ್ಯಕ್ತಿತ್ವದ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ ಎಂಬುದಕ್ಕೆ ಕುಸುಮಳ ಮನೋರೋಗದ ಕಥೆಯನ್ನೊಳಗೊಂಡ `ಬೆಕ್ಕಿನ ಕಣ್ಣು ಗಾತ್ರದಲ್ಲಿ ದೊಡ್ಡದಾಗಿದ್ದು ಸೂತ್ರದಲ್ಲೂ ಹಿರಿದಾಗಿದೆ.

	ದೂರದ ಬೆಟ್ಟದಲ್ಲಿ ಜಾಗೃತ ಪ್ರಜ್ಞೆ ಹಾಗೂ ಸುಪ್ತ ಪ್ರಜ್ಞೆಗಳ ಹೋರಾಟವನ್ನು ಕಾಣುತ್ತೇವೆ.
ಮನುಷ್ಯರ ಪರಸ್ಪರ ವಿರೋಧಭಾವಗಳನ್ನು ಕಾಣುವ `ಮುಚ್ಚಿದ ಬಾಗಿಲು ಕಾದಂಬರಿ ಆ ಬಾಗಿಲು ತೆರೆದಾಗಲೇ ಮನಸ್ಸಿನ ಹುಳುಕು, ಅಸಭ್ಯತನ ಕೊಳೆ, ಹೊರಗಿನವರಿಗೆ ಗೋಚರವಾಗುತ್ತದೆಂಬುದನ್ನು ಚಿತ್ರಿಸಿದೆ. ಮನೋರೋಗಕ್ಕೆ ತುತ್ತಾದ ಹೆಣ್ಣೊಬ್ಬಳ ಸುತ್ತ ಹೆಣೆದ ಶರಪಂಜರ ಕಾದಂಬರಿ ಮಾನಸಿಕ ರೋಗಿಯ ದುರಂತತೆಯನ್ನು ಚಿತ್ರಿಸುತ್ತದೆ. 'ಬೆಟ್‍ನಂ ಏಳು `ಆಕರ್ಷಣ' `ಹಸಿರು ಪೀತಾಂಬರ `ಚಿನ್ಮಯಿ `ಕೊನೆಯ ನಿರ್ಧಾರ `ತಾಯಿ ಅವಳ ತಾಯಿ ಮೊದಲಾದ ಕಥೆಗಳು ಗಂಡು ಹೆಣ್ಣಿನ ಜೀವನ ಅಂತ:ಕರಣ ಹೊಂದಾಣಿಕೆಯ ಜೀವನ ಶ್ರೀಮಂತಿಕೆಯನ್ನು ಚಿತ್ರಿಸುತ್ತದೆ.
`ಆಲಿ ಅನಿಲ್ `ಇಂದುನಾಳೆ `ಪ್ರೇಮದ ಬೆಳಕು ಸಾಕಿದ ಬದುಕಿನ ಮಾರ್ಗದಲ್ಲಿ ಈ ಕಥೆಗಳು ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುತ್ತದೆ. ಇವುಗಳಲ್ಲಿ ಆಲಿ ಅನಿಲ್ ವಸ್ತುವು ಹಿಂದೂ ಮುಸ್ಲಿಂ ಮನೆಯ ಗಲಭೆಯ ಕಾಲದಲ್ಲಿ ನಡೆದ ಘೋರಘಟನೆಯ ಹಿನ್ನಲೆಯನ್ನು ಹೊಂದಿದೆ. `ಬಲವಿನಪತಿ' 'ತಾಯ್ತನದ ಹಿಗ್ಗು `ವಸಂತಗಾನ `ಅವಳಮನೆ ಹೃದಯಗೀತೆ ಇವು ಗೃಹಿಣಿಯ ಬದುಕಿನ ಆದರ್ಶವನ್ನು ಪ್ರತಿಬಿಂಬಿಸುತ್ತವೆ.

ಒಟ್ಟಿನಲ್ಲಿ ಮಹಿಳೆಯರ ಪರವಾದ ಸದಭಿಪ್ರಾಯ ಹಾಗೂ ಪುರುಷರ ದ್ರೋಹ ಬುದ್ಧಿಯ ಚಿತ್ರಣಗಳನ್ನೇ ಇವರ ಎಲ್ಲ ಕಾದಂಬರಿಗಳಲ್ಲೂ ಕಾಣಬಹುದು. ಕನ್ನಡ ಮಹಿಳಾ ಸಾಹಿತಿಗಳಲ್ಲಿ ಮನೋವಿe್ಞÁನವನ್ನು ಬಳಸಿಕೊಂಡು ಕಾದಂಬರಿ ರಚನೆ ಮಾಡಿದವರ ಫೈಕಿ ಇವರೇ ಮೊದಲಿಗರೆನ್ನಬಹುದು. ಇವರ ಕೆಲವು ಕಾದಂಬರಿಗಳು ರಜತ ಪರದೆಯ ಮೇಲೆ ಯಶಸ್ವಿಯಾಗಿ ಬಂದಿವೆ. ಇವರು 29-7-63ರಲ್ಲಿ ನಿಧನರಾದರು.						(ಎಚ್.ಬಿ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ